ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

ಬೈಂದೂರು : ನೆಟ್‌ವರ್ಕ್ ಸಮಸ್ಯೆ ಬಗೆಹರಿಯದೆ ಇದ್ದದ್ದನ್ನು ಖಂಡಿಸಿ ಊರಿನ‌ ನಾಗರಿಕರು ಚುನಾವಣೆಯನ್ನು ಬಹಿಷ್ಕರಿಸಲು ಚಿಂತನೆ ನಡೆಸಿದ್ದಾರೆ. ತಾಲೂಕಿಗೆ ಸಮೀಪದ ಊರುಗಳಾದ ಹಾಲಂಬೇರು, ಮೂಡಣಗದ್ದೆ,ಚಂದಣ, ಸಂಪಿಗೆಕೊಡ್ಲು,ಮಣ್ಣು ತೊಡಮೆ, ಬುಸಕ್ರಡಿ, ಹೊಸೇರಿ ಭಾಗಗಳಲ್ಲಿ ಅನೇಕ ವರ್ಷಗಳಿಂದ ನೆಟ್‌ವರ್ಕ್ ಸಮಸ್ಯೆ ಕಾಡತೊಡಗಿದ್ದು ಈ ಬಗ್ಗೆ ಸ್ಥಳೀಯ ನಾಯಕರೂ ಸೇರಿ ಹಲವು ಬಾರಿ ಮನವಿ ಮಾಡಿಕೊಂಡರೂ ಸಮಸ್ಯೆ ಇನ್ನೂ ಜೀವಂತವಾಗಿ ಹಾಗೆಯೇ ಉಳಿದುಕೊಂಡಿರುವುದರಿಂದ ಸಮಸ್ಯೆ ಬಗೆಹರಿಯುವವರೆಗೂ ಈ ಬಾರಿಯ ಪಂಚಾಯತ್ ಚುನಾವಣೆಯ ಜೊತೆಗೆ ಮುಂಬರುವ ಎಲ್ಲಾ ಮಾದರಿಯ ಚುನಾವಣೆಗಳನ್ನು ಬಹಿಷ್ಕಾರಿಸುವ ನಿರ್ಧಾರದ ಬಗ್ಗೆ ಗ್ರಾಮಸ್ಥರಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಏನಿದು ನಾಟ್ ರೀಚಬಲ್ ಕಥೆ? Coverpage.in ಗ್ರೌಂಡ್ ರಿಪೋರ್ಟ್. ಪೇಟೆಯಿಂದ ಸ್ವಲ್ಪವೇ ದೂರ ಇರುವ ಈ ಊರಿನ ನಿವಾಸಿಗಳಿಗೆ ಕರೆ ಮಾಡಿದರೆ ನಿಮಗೆ ಕೇಳಿಸುವುದು "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಅಥವಾ ಸ್ವಿಚ್ ಆಫ್ ಆಗಿದೆ." ಎಂತಹ ತುರ್ತು ಪರಿಸ್ಥಿತಿ ಇದ್ದರೂ ನೀವು ಕರೆಮಾಡಿದವರನ್ನು ಸಂಪರ್ಕಿಸುವುದು ತುಂಬಾ ಕಷ್ಟ. ಅಪ್ಪಿ ತಪ್ಪಿ ನಿಮ್ಮ ಕಾಲ್ ಕನೆಕ್ಟ್ ಆದರೂ ಸಲೀಸಾಗಿ ಮಾತಾನಾಡುವುದಂತೂ ಸಾಧ್ಯವೇ ಇಲ್ಲ. ಯಾಕಂದ್ರೆ ಈ ಊರಲ್ಲಿ ನೆಟ್ವರ್ಕ್ ಕ್ಕೆ ಆ ಮಟ್ಟಿಗೆ ಇದೆ..! ಅಂದಹಾಗೆ ಇದೇನು ಆಫ್ರಿಕಾದ ಅಮೆಝೋನ್ ನಂತ ದಟ್ಟ ಅರಣ್ಯ ಪ್ರದೇಶ ಅಲ್ಲ. ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಿಂದ ಕೇವಲ ೫ಕಿ ಮೀ ದೂರ ಇರುವ ತಗ್ಗರ್ಸೆ ಗ್ರಾಮದ ಚಂದಣ-ಮೂಡಣಗದ್ದೆ ಆಸುಪಾಸಿನ ನಿವಾಸಿಗಳ ದಿನ ನಿತ್ಯದ ಎಂದೂ ಮುಗಿಯದ ಗೋಳು.


ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಸಮೀಪದ ಊರುಗಳಾದ ಹಾಲಂಬೇರು, ಮೂಡಣಗದ್ದೆ, ಚಂದಣ, ಸಂಪಿಗೆಕೊಡ್ಲು,ಮಣ್ಣು ತೊಡಮೆ, ಬುಸಕ್ರಡಿ, ಹೊಸೇರಿ ಭಾಗಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು ಈ ಪ್ರದೇಶದಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಅನೇಕ ಸಣ್ಣ, ಅತೀ ಸಣ್ಣ ಉದ್ದಿಮೆಗಳೂ ಅಭಿವೃದ್ಧಿ ಹೊಂದುತ್ತಿದ್ದರೂ ನೆಟ್ವರ್ಕ್ ಸಮಸ್ಯೆ ಎಲ್ಲದಕ್ಕೂ ಅಡ್ಡಗಾಲಾಗಿ ನಿಂತಿದೆ.

ಲಾಕ್ ಡೌನ್ ನಂತರ ದೇಶದಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯ ಎಲ್ಲ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆಗಳು ಆದವು. ಅತೀ ಮುಖ್ಯವಾಗಿ ಶಿಕ್ಷಣ ಹಾಗೂ ಉದ್ಯೋಗ ತನ್ನ ಕಾರ್ಯನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡವು. ಶಿಕ್ಷಣ ಆನ್ಲೈನ್ ಆಯ್ತು, ಕೆಲಸ ವರ್ಕ್ ಫ್ರಮ್ ಹೋಂ ಆಯ್ತು. ಆದರೆ ಈವೆರಡು ಚಂದಣ-ಮೂಡಣಗದ್ದೆ ಆಸುಪಾಸಿನ ನಿವಾಸಿಗಳ ಪಾಲಿಗೆ ಅಕ್ಷರಶ ಶಾಪವಾಗಿ ಪರಿಣಮಿಸಿದ್ದು ದುರಂತ.

ಆತಂಕ ಹೆಚ್ಚಿಸಿದೆ ಆನ್ಲೈನ್ ಶಿಕ್ಷಣ:

ಇತ್ತೀಚಿಗಷ್ಟೇ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್ ನೆಟ್‌​ವ​ರ್ಕ್ ಸಿಗದೆ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದದನ್ನು ಸುದ್ದಿ ಚಾನೆಲ್ಗಳು ಪ್ರಸಾರ ಮಾಡಿದ್ದವು. ಈ ಭಾಗದ ವಿದ್ಯಾರ್ಥಿಗಳ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಹೀಗಾದರೆ ಡಿಜಿಟಲ್ ಶಿಕ್ಷಣದ ಲಾಭ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಲಭಿಸುವುದು ಯಾವಾಗ? ಶೈಕ್ಷಣಿಕ ಕ್ರಾಂತಿಗೆ ಇನ್ನೆಷ್ಟು ವರುಷ ಬೇಕು?

ಗುಡ್ಡಗಾಡು ಪ್ರದೇಶದಲ್ಲಿ ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು

ಮನೆಯಿಂದ ಕೆಲಸ, ಮನೆಯಲ್ಲೇ ಉಳಿಯುವಂತಾಗದಿರಲಿ: ಇನ್ನೂ, ಪಟ್ಟಣದಲ್ಲಿ ಉದ್ಯೋಗದಲ್ಲಿ ಇದ್ದವರನ್ನು ಕೊರೋನ ಊರಿಗೆ ಕಳುಹಿಸಿದೆ. ಅವರಿಗೆಲ್ಲ ತಾವು ಕೆಲಸ ಮಾಡುತ್ತಿರುವ ಸಂಸ್ಥೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಆದೇಶಿಸಿದರೂ ನೆಟ್ ವರ್ಕ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡಲಾಗದೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಒಂದು ವೇಳೆ ಅಂತಹ ಸಂಗತಿಗಳು ನಡೆದುಹೋದರೆ ಇವರುಗಳ ಭವಿಷ್ಯಕ್ಕೆ ಹೊಣೆ ಯಾರು??


ಸ್ವಾಭಿಮಾನಿಗಳಿಗೆ ಸಂಕಷ್ಟ, ಆತ್ಮ ನಿರ್ಭರ್ ಭಾರತ ಸಾಧ್ಯಾನಾ??
ಸಣ್ಣ ಊರು, ಸ್ವಲ್ಪ ಹಳ್ಳಿಯಾದರೂ ಇಲ್ಲಿನ‌ ಜನರು ಕಷ್ಟ ಸಹಿಷ್ಣುಗಳು ಜೊತೆಗೆ ಒಂದಷ್ಟು ಹೆಚ್ಚು ಎಂಬಷ್ಟು ಸ್ವಾಭಿಮಾನಿಗಳು. ಅದಕ್ಕೆ ಸಾಕ್ಷಿ ಈ ಭಾಗದಲ್ಲಿ ತಲೆ ಎತ್ತಿದ ಸಣ್ಣ-ಪುಟ್ಟ ಉದ್ದಿಮೆಗಳು. ಕಾಲೇಜು ದೂರ ಇದ್ದರೂ ತಕ್ಕ ಮಟ್ಟಿನ ಶಿಕ್ಷಣ ಪಡೆದು ಸ್ವಂತ ಉದ್ದಿಮೆ ಮಾಡಿಕೊಂಡು ಜೀವನ‌ಸಾಗಿಸುವ ದೊಡ್ಡ ಯುವ ಸಮೂಹವೆ ಈ ಊರಿನಲ್ಲಿದೆ. ಆದರೆ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ತಾವು ಕಷ್ಟ ಪಟ್ಟು ಕಟ್ಟಿದ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಹಾಗೂ ಗ್ರಾಹಕರನ್ನು ಸಮಯಕ್ಕೆ ಸರಿಯಾಗಿ ಸಂಪರ್ಕಿಸಲು ಸಾಧ್ಯವಾಗದೆ ಉದ್ಯಮದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೀಗಾದರೆ ಪ್ರಧಾನಿ ಮೋದಿಯವರು ಹೇಳಿದ "ಆತ್ಮ ನಿರ್ಭರ ಭಾರತ" ಸಾಧ್ಯನಾ..?

ಸಿಗ್ನಲ್ ನ ಅನಾರೋಗ್ಯಕ್ಕೆ ಚಿಕಿತ್ಸೆ ಯಾವಾಗ? ಚಂದಣದಿಂದ ಸುಮಾರು 2ಕಿ.ಮಿ ದೂರದಲ್ಲಿ ಮೊಬೈಲ್ ಟವರ್ ಇದ್ದರೂ ಕೂಡ ಬೆಟ್ಟವೊಂದು ಅಡ್ಡವಾಗುವ ಕಾರಣ ಸಿಗ್ನಲ್ ಚಂದಣ ಮೂಡಣಗದ್ದೆ ಭಾಗವನ್ನು ತಲುಪುತ್ತಿಲ್ಲ. ತುರ್ತುಸ್ಥಿತಿಯಲ್ಲಿ ಯಾರನ್ನಾದರೂ ಸಂಪರ್ಕಿಸಬೇಕಿದ್ದರೆ 2ಕಿ.ಮಿ ದೂರಕ್ಕೆ ಬಂದು ಸಂಪರ್ಕಿಸಬೇಕಾಗುತ್ತದೆ.


ಜನಾಭಿಪ್ರಾಯ: ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ. - ರವಿ ಹಾಲಂಬೇರು. ಅಭಿವೃದ್ಧಿಯ ಹರಿಕಾರ, ಜನ ಮೆಚ್ಚಿದ ನಾಯಕ ಮಾನ್ಯ ಶಾಸಕರಾದ ಬಿ.ಎಮ್ ಸುಕುಮಾರ್ ಶೆಟ್ಟಿಯವರ ಗಮನಕ್ಕೂ ‌ತಂದಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. -ರಾಜೇಶ್ ಮೂಡಣಗದ್ದೆ. ನೆಟ್ವರ್ಕ್ ಇಲ್ಲದೆ ಊರಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತುಂಬಾ ತೊಡಕಾಗಿದೆ‌. ಅಷ್ಟೆ ಅಲ್ಲದೆ ಯಾರಿಗಾದರೂ ಆರೋಗ್ಯದ ಸಮಸ್ಯೆ ಎದುರಾದರೆ ತಕ್ಷಣ ಆರೋಗ್ಯ ಕವಚ 108ಕ್ಕೆ ಕರೆ ಮಾಡಲು ಸಂಪರ್ಕದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ನೀಡಿದರೆ ತುಂಬಾ ಅಭಾರಿ ಆಗಿರುತ್ತೇವೆ. - ಸೀತಾರಾಮ ಗಾಣಿಗ ನೆಲ್ಲಿಕೊಡ್ಲು
ಊರಿನಲ್ಲಿನ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಈಗಾಗಲೇ ಮಾನ್ಯ ಶಾಸಕರು ಸುಕುಮಾರ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದೇವೆ. ಅವರು ನಮ್ಮ ಮನವಿಗೆ ಸ್ಪಂದಿಸಿ ಭರವಸೆ ಕೊಟ್ಟಿದ್ದಾರೆ. - ಮಂಜುನಾಥ ಗಾಣಿಗ ಚಂದಣ

ನನಗೆ ನಂಬಿಕೆ ಇರುವುದು ನಮ್ಮ ಹೆಮ್ಮೆಯ ಶಾಸಕರಾದ ಸುಕುಮಾರ್ ಶೆಟ್ಟಿಯವರ ಮೇಲೆ ಅವರ ಪ್ರಯತ್ನಕ್ಕೂ ಫಲ ಸಿಗದಿದ್ದಲ್ಲಿ ನಮ್ಮ ಕ್ರಮ ಕೈಗೊಳ್ಳಲೇ ಬೇಕು
-ನಾಗರಾಜ್ ಗಾಣಿಗ ಹಾಲಂಬೇರು

ಮತದಾನ ಪ್ರತಿಯೊಬ್ಬರ ಹಕ್ಕು ದೇಶದ ನಾಯಕರನ್ನು ಆರಿಸುವ ಕಾರ್ಯ ಮತದಾನವನ್ನೆ ಬಹಿಷ್ಕರಿಸಲು ಹೊರಟಿದ್ದೆವೆ ಎಂದರೆ ನಮ್ಮ ಸಮಸ್ಯೆ ಎಷ್ಟಿರಬಹುದು ಯೋಚಿಸಿ .
- ಸಮಸ್ತ ಹಾಲಂಬೇರು, ಮೂಡಣಗದ್ದೆ, ಚಂದಣ, ಸಂಪಿಗೆಕೊಡ್ಲು, ಮಣ್ಣುತೊಡಮೆ, ಬುಸಕ್ರಡಿ, ಹೊಸೇರಿ,ಗ್ರಾಮಸ್ಥರು.

ನೆಟ್‌ವರ್ಕ್ ಸಮಸ್ಯೆ ಆದಷ್ಟು ಬೇಗ ಬಗೆಹರಿಸುವತ್ತ ನಾಯಕರು, ಅಧಿಕಾರಿಗಳು ಇಚ್ಛಾಶಕ್ತಿ ತೋರಲಿ, ಹಾಲಂಬೇರು, ಮೂಡಣಗದ್ದೆ, ಚಂದಣ, ಸಂಪಿಗೆಕೊಡ್ಲು, ಮಣ್ಣುತೊಡಮೆ, ನೆಲ್ಲಿಕೊಡ್ಲು, ಹೊಸೇರಿ, ಯಡೇರಿಗದ್ದೆ, ಕಳಿಹೊಳೆ. ಭಾಗದ ಜನರ ಸಂಪರ್ಕ ಸೇತುವೆ ಇನ್ನಷ್ಟು ಗಟ್ಟಿಯಾಗಲಿ. ಇನ್ನು ಚುನಾವಣೆಯಲ್ಲಿ ಮತದಾನ ಮಾಡುವುದು ಒಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯ ಅದನ್ನು ಸಮಸ್ಯೆಯ ಪರಿಹಾರಕ್ಕಾಗಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಇನ್ನಾದರೂ ಅಧಿಕಾರಿಶಾಹಿಗಳು ಈ ಬಗ್ಗೆ ಗಮನ ಹರಿಸುವಂತಾಗಲಿ.‌ ಚಂದಿರನಿಲ್ಲದ ಭಾನಿನಲ್ಲಿ ಬೆಳದಿಂಗಳ ಹುಡುಕುವ ಕುರುಡರಂತೆ ಆಗದಿರಲಿ ಸಂಕಷ್ಟಕ್ಕೊಳಗಾದ ಗ್ರಾಮಸ್ಥರ ಬದುಕು.


ಇದನ್ನು ಓದಿ : ಸರಳ, ಸಜ್ಜನ, ಶಿಕ್ಷಣ ಸಂತ ಬಿ.ಎಮ್ ಸುಕುಮಾರ ಶೆಟ್ಟಿ


ನರೇಂದ್ರ 
7483946089
Coverpage.in



Image Description