ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

    ಕಾರ್ತಿಕ ಮಾಸ ಬಂದ್ರೆ ತುಳಸಿ ವಿವಾಹ ನೆನಪಾಗುತ್ತೆ. ಏಕಾದಶಿ  ಅಥವಾ ಹುಣ್ಣಿಮೆಯ ದಿನ ಮನೆಯಂಗಳದಲ್ಲಿರುವ ತುಳಸಿಗಿಡ ಹಾಗೂ ವಿಷ್ಣುರೂಪಿ ಸಾಲಿಗ್ರಾಮಕ್ಕೆ ಮದುವೆ ಮಾಡಿಸೋದು ನಮ್ಮ ಸಂಪ್ರದಾಯ. ಆ ದಿನ ನಮ್ಮ ಹೆಣ್ಣು ಮಕ್ಕಳಿಗೆ ಅದೇನೋ ಸಂಭ್ರಮ . ಬಿಹಾರಾದಲ್ಲಂತೂ ತುಳಸಿ ಹಬ್ಬವನ್ನು ಸಾರ್ವಜನಿಕ ಹಬ್ಬದಂತೆ ಆಚರಿಸೋ ಪದ್ದತಿ ಕೂಡಾ ಇದೆ. ಇಷ್ಟಕ್ಕೂ ಸಾಮಾನ್ಯ ಒಂದು ತುಳಸಿ ಗಿಡವನ್ನು ವಿಷ್ಣುವಿನ ಪತ್ನಿ ಅಂತ ಪೂಜಿಸೋ ವಿಶಿಷ್ಟ ಆಚರಣೆ ಶುರುವಾಗಿದ್ದು ಹೇಗೆ ...? .. ಹೋಗ್ಲಿ ಈ ತುಳಸಿ ಯಾರು ..? ಈಕೆಗೆ ಗಿಡದ ರೂಪ ಬಂದಿದ್ದು ಹೇಗೆ ...?..  ವಿಷ್ಣುಪ್ರಿಯೆ ಅನಿಸಿಕೊಂಡಿದ್ದ ಈಕೆ ಒಂದು ಹಂತದಲ್ಲಿ ಸಾಕ್ಷಾತ್ ವಿಷ್ಣುವಿಗೆ ಶಾಪ ನೀಡಿದ್ಯಾಕೆ ...? ಗೊತ್ತಾ..! 



ಅಸುರನ ರಾಣಿಯೊಬ್ಬಳು ತುಳಸಿ ಗಿಡವಾಗಿದ್ದು ಹೇಗೆ , ಅವಳು ವಿಷ್ಣುವಿಗೆ ಶಾಪ ನೀಡಿದ್ಯಾಕೆ ಎಂಬುದರ ಬಗ್ಗೆ ವಿಷ್ಣುಪುರಣದಲ್ಲಿ ಒಂದು ಅದ್ಭುತವಾದ ಕತೆ ಇದೆ. ಅದು ಏನೆಂದು ಸಣ್ಣ ರೂಪದಲ್ಲಿ ತಿಳಿಸುತ್ತೇನೆ .




ಅಂದಹಾಗೆ ಈ ತುಳಸಿಯ ಹಿಂದಿನ ಜನ್ಮದ ಹೆಸರು "ವೃಂದಾ" ಈಕೆ "ಕಾಲನೇಮಿ" ಎಂಬ ಒಬ್ಬ ಅಸುರ ರಾಜನ ಮಗಳು . ಅಸುರನ ಮಗಳಾದರೂ ವೃಂದಾ ವಿಷ್ಣುವಿನ ಪರಮ ಭಕ್ತೆ . ಮುಂದೆ ಕಾಲನೇಮಿ ಆಕೆಯನ್ನು "ಜಲಂಧರಾ" ಎಂಬ ಅಸುರರಾಜನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಮಹಾನ್ ವಿಷ್ಣು ಭಕ್ತೆ ಅನಿಸಿಕೊಂಡಿದ್ದ ವೃಂದಾಳನ್ನು ಕೈಹಿಡಿದ ಧೈತ್ಯರಾಜ ಜಲಂಧರನೇನು ಸಾಮಾನ್ಯ ಇರ್ಲಿಲ್ಲ. ಹೇಳಿಕೇಳಿ ಈತ ಶಿವನ ಹಣೆಗಣ್ಣಿನ ಕಿಡಿಯಿಂದ ಹುಟ್ಟಿದವನು . ಅದೊಮ್ಮೆ ಇಂದ್ರನ ವಿರುದ್ಧ ಕೋಪಗೊಂಡ ಪರಶಿವನು ತನ್ನ ಮೂರನೇ ಕಣ್ಣಿನಿಂದ ಇಂದ್ರನನ್ನು ಭಸ್ಮಮಾಡಲು ಮುಂದಾಗುತ್ತಾನೆ. ಆಗ ಮಧ್ಯಪ್ರವೇಶಿಸಿದ ದೇವತೆಗಳ ಗುರು ಭ್ರಹಸ್ಪತಿ ಇಂದ್ರನನ್ನು ಕ್ಷಮಿಸುವಂತೆ ಶಿವನನ್ನು ಮನವಿ ಮಾಡುತ್ತಾರೆ. ಇದರಿಂದ ತಣ್ಣಗಾದ ಶಿವ ದೇವೇಂದ್ರನನ್ನು ಸುಡಲು ತನ್ನ ಹಣೆಗಣ್ಣಿನಿಂದ ಹೊರಬಂದಿದ್ದ ಕಿಡಿಯನ್ನು ಸಮುದ್ರದತ್ತ ತಿರುಗಿಸುತ್ತಾನೆ . ಹೀಗೆ ಸಮುದ್ರಕ್ಕೆ ಬಿದ್ದ ಶಿವನ ಹಣೆಗಣ್ಣಿನ ಕಿಡಿಯಿಂದ ಸೃಷ್ಟಿಯಾದವನೆ "ಜಲಂಧರಾ".  ಸಾಗರ ಜಲದಿಂದ ಹುಟ್ಟಿಬಂದವನಾಗಿದ್ದರಿಂದ ಈತನಿಗೆ ಜಲಂಧರಾ ಎಂಬ ಹೆಸರು ಪ್ರಾಪ್ತವಾಯಿತು ಎನ್ನುತ್ತವೆ ಪುರಾಣಗಳು. ಒಂದು ಹಂತದಲ್ಲಿ ದೇವದಾನವರು  ಕ್ಷೀರಸಾಗರ ಮಂಥನಕ್ಕೆ ಮುಂದಾದಾಗ ಈ ದಾನವ ರಾಜ ಅದು ನನಗೆ ಸೇರಿದ್ದು ಯಾವುದೇ ಕಾರಣಕ್ಕೂ ನೀವು ಸಮುದ್ರ ಮಂಥನ ಮಾಡಬಾರದು ಎಂದು ಖ್ಯಾತೆ ತೆಗೀತಾನೆ . ಇದೆ ಕಾರಣಕ್ಕೆ ದೇವ-ಅಸುರನ ನಡುವೆ ಘೋರ ಕದನವೇ ಶುರುವಾಯ್ತು ಆಗ ದೇವತೆಗಳು ಜಲಂಧರಾನನ್ನು ಕೊಲ್ಲುವಂತೆ ವಿಷ್ಣುವಿನ ಮೊರೆ ಹೋಗ್ತಾರೆ . ಆದರೆ ತನ್ನ ಮಹಾನ್ ಭಕ್ತೆ ವೃಂದಾಳ ಪತಿಯಾಗಿದ್ದ ಜಲಂಧರಾನನ್ನ ತನಗೆ ಕೊಲ್ಲಲು ಆಗುವುದಿಲ್ಲ ಎಂದು ದೇವತೆಗಳ ಮನವಿಯನ್ನು ತಿರಸ್ಕರಿಸುತ್ತಾರೆ. ಆದರೆ ಅಷ್ಟಕ್ಕೇ ಸುಮ್ಮನಾಗದ ದೇವತೆಗಳು ಜಲಂಧರಾನ  ಸಂಹಾರಕ್ಕೆ ಯವುದಾದರೊಂದು ಉಪಾಯ ಹೇಳುವಂತೆ ನಾರದಮುನಿಗಳ  ಮೊರೆ ಹೋಗುತ್ತಾರೆ. ಆಗ ಜಲಂಧರನ ಅರಮನೆಗೆ ಬಂದ ತ್ರಿಲೋಕ ಸಂಚಾರಿ ನಾರದರು ಸಾಕ್ಷಾತ್ ಪರ್ವಾತಿಯ ರೂಪ,ಲಾವಣ್ಯವನ್ನು ವರ್ಣಿಸೋದಕ್ಕೆ ಆರಂಭಿಸುತ್ತಾರೆ. ಇದರಿಂದ ಚಂಚಲಚಿತ್ತನಾದ ಜಲಂಧರಾ ತಾನು ಶಿವ ಪುತ್ರ ಎಂಬುದನ್ನು ಮರೆತು ಪರ್ವಾತಿಯನ್ನು  ಮೋಹಿಸುವುದಕ್ಕೆ ಆರಂಭಿಸುತ್ತಾನೆ. ಆಕೆಯನ್ನು ವಲಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಾನೆ. ಪರ್ವಾತಿ ಎಷ್ಟು ತಿಳಿಹೇಳಿದರು ಕೇಳದ ಜಲಂಧರನನ್ನು ಕೊನೆಗೆ ಶಿವ ಕೊಲ್ಲಲು  ಮುಂದಾಗುತ್ತಾನೆ.


 

ಸಾಕ್ಷಾತ್ ಶಿವನ ವಿರುದ್ಧವೇ ಯುದ್ಧಕ್ಕೆ ನಿಂತ ಜಲಂಧರನಿಗೆ ಆರತಿ ಎತ್ತಿ ಬೀಳ್ಕೊಟ್ಟ ಆತನ ಪತ್ನಿ ವೃಂದಾ ಆ ಯುದ್ಧದಲ್ಲಿ ತನ್ನ ಪತಿಗೆ ಜಯ ಸಿಗಲಿ  ಎಂದು ವಿಷ್ಣುವಿನ ಜಪ ಆರಂಭಿಸುತ್ತಾಳೆ. ತನ್ನ ಪತಿ ಜಯಶಾಲಿಯಾಗಿ ಹಿಂದಿರುಗಿ ಬರುವವರೆಗೂ ತನ್ನ ಜಪ ನಿಲ್ಲುವುದಿಲ್ಲ ಎಂದು ಪಣತೊಡುತ್ತಾಳೆ. ಈ ಹಂತದಲ್ಲಿ ವೃಂದಾಳ ಜಪ ಭಂಗವಾಗದೆ ಇದ್ದಲ್ಲಿ ಜಲಂಧರಾನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದ ದೇವತೆಗಳು  ಈ ಯುದ್ಧದಲ್ಲಿಯದರೂ ತಮ್ಮ ಬೆಂಬಲಕ್ಕೆ ಬರುವಂತೆ ವಿಷ್ಣುವಿನ ಮೊರೆ ಹೋಗುತ್ತಾರೆ. ಈ ಭಾರಿ ದೇವತೆಗಳ ಮನವಿಗೆ ಮಣಿದ ಮಹಾವಿಷ್ಣು . ಜಲಂಧರಾ ರೂಪ ದರಿಸಿ ವೃಂದಾ ಧ್ಯಾನದಲ್ಲಿ ತಲ್ಲೀನವಾಗಿದ್ದಾಗ ಅರಮನೆಗೆ ಬರುತ್ತಾನೆ. ಆಗ ಪತಿಯ ರೂಪದಲ್ಲಿ ಬಂದ ಮಹಾವಿಷ್ಣುವನ್ನು ಕಂಡ ವೃಂದಾ ಸ್ವತಃ ತನ್ನ ಪತಿಯೇ ಯುದ್ಧಗೆದ್ದು ಬಂದಿದ್ದಾರೆಂದು ಭಾವಿಸುತ್ತಾಳೆ. ಹೀಗಾಗಿ ತಾನು ಕೈಗೊಂಡಿದ್ದ ವಿಷ್ಣು ಜಪವನ್ನು ಅರ್ಧಕ್ಕೆ ನಿಲ್ಲಿಸಿ ಎದ್ದು ಬಂದ ವೃಂದಾ ಜಲಂಧರಾನ ರೂಪದಲ್ಲಿದ್ದ ವಿಷ್ಣುವಿನ ಪಾದಗಳಿಗೆ ನಮಸ್ಕರಿಸುತ್ತಾಳೆ. ಇತ್ತ ವೃಂದಾಳ ವೃತ ಭಂಗವಾಗುತ್ತಿದ್ದಂತೆ ಅತ್ತ ಜಲಂಧರಾ ಶಿವನಿಂದ ಸಂಹರಿಸಲ್ಪಡುತ್ತಾನೆ. ಇದಕ್ಕೆ ಕೋಪಗೊಂಡ ವೃಂದಾ ಜಪಕ್ಕೆ  ಭಂಗ ತಂದು ತನ್ನ ಪತಿಯ ಸಾವಿಗೆ ಕಾರಣವಾದ ವಿಷ್ಣುವಿಗೆ ಶಪಿಸುತ್ತಾಳೆ. ಭಕ್ತೆಯ ವಿಚಾರದಲ್ಲಿ ಕಲ್ಲುಮನಸ್ಸಿನವನಾದ ನೀನು ಮುಂದಿನ ಜನ್ಮದಲ್ಲಿ ಗಂಡತಿನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಾಗಿಬಿಡು ,ಜೊತೆಗೆ ನಿನ್ನ ಪತ್ನಿ ಲಕ್ಷ್ಮೀಯನ್ನು ಕಳೆದುಕೊಂಡು ನನ್ನಂತೆ ನೀನು ಕೂಡಾ ವಿರಹ ವೇದನೆಯನ್ನು ಅನುಭವಿಸು ಎಂದು ವಿಷ್ಣುವಿಗೆ ಶಾಪ ನೀಡಿದ ವೃಂದಾ ಶಿವನಿಂದ ಹತನಾದ ತನ್ನ ಪತಿ ಜಲಂಧರಾ ನ ಶಿರಸ್ಸಿನೊಂದಿಗೆ ಅಗ್ನಿಪ್ರವೇಶ ಮಾಡುತ್ತಾಳೆ.  ಮುಂದೆ ಸುಟ್ಟು ಭಸ್ಮವಾದ ಆಕೆಯ ಚಿತೆಯ ಬೂದಿಯಿಂದಲೇ  ವೃಂದಾ ತುಳಸಿ ಗಿಡದ ರೂಪ ಧರಿಸಿದಳಂತೆ . ಸ್ವಯಂ ತನ್ನ ಭಕ್ತೆಯಿಂದಲೇ ಶಾಪಕ್ಕೆ ಗುರಿಯಾದ ವಿಷ್ಣು ಮುಂದೆ ಸಾಲಿಗ್ರಾಮ ರೂಪ ಪಡೆದನಂತೆ . ಅಷ್ಟೇ ಅಲ್ಲ ವೃಂದಾಳ ಶಾಪದಿಂದಾಗಿಯೇ ತ್ರೇತ್ರಾಯುಗದಲ್ಲಿ ಶ್ರೀರಾಮನಾಗಿ ಅವತರಿಸಿದ ಮಹಾವಿಷ್ಣು ಸೀತೆಯನ್ನು ಕಳೆದುಕೊಂಡು ದುಃಖಿಸುವಂತಾಯಿತು ಎನ್ನುತ್ತವೆ ಪುರಾಣಗಳು. ಅಷ್ಟೇ ಅಲ್ಲ ವೃಂದಾಳ ಚಿತೆಯ  ಬೂದಿಯಿಂದ  ಹುಟ್ಟಿ ಬಂದ ಆ ಅಮೂಲ್ಯ ಗಿಡಕ್ಕೆ ತುಳಸಿ ಎಂದು ಹೆಸರಿಟ್ಟ ಮಹಾವಿಷ್ಣು ಇದರಿಂದಲೇ ನನ್ನ ಸಾಲಿಗ್ರಾಮ ರೂಪವನ್ನು ಪೂಜಿಸುವಂತಾಗಲಿ ಎನ್ನುತ್ತಾನೆ. ಶಿಲೆಯನ್ನು ತುಳಸಿಯಿಂದ ಪೂಜಿಸುವ ಪದ್ದತಿ ನಮ್ಮಲ್ಲಿ ಇನ್ನೂ ಇದೆ . ಈ ತುಳಸಿ ಸಾಕ್ಷಾತ್ ಲಕ್ಷ್ಮೀಯ ಸ್ವರೂಪ ಎಂದು ಭಾವಿಸುವ ನಾವು ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿ  ಅಥವಾ ಕಾರ್ತಿಕ ಹುಣ್ಣಿಮೆಯ ದಿನದಂದು  ಸಲಿಗ್ರಾಮದೊಂದಿಗೆ ತುಳಸಿಯ ವಿವಾಹ ನೆರವೇರಿಸುತ್ತೇವೆ . ಆ ದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವಿರೋ ಹೆಣ್ಣುಮಕ್ಕಳು ಸಂಜೆ ಮನೆಯಂಗಳದಲ್ಲಿ ಚಪ್ಪರ ಹಾಕಿ ತುಳಸಿಗೆ ಸೀರೆಯುಡಿಸಿ ಆಭರಣಗಳಿಂದ ಆಕೆಯನ್ನು ಅಲಂಕರಿಸಿ ಭಕ್ತಿ ಭಾವಗಳಿಂದ ಪೂಜಿಸುತ್ತಾರೆ. ಹಿಂದುಗಳ ಪಾಲಿಗಂತೂ ಈ ತುಳಸಿಹಬ್ಬ ಸುಗ್ಗಿ ಮುಗಿದು ಮದುವೆಗಳ ಕಾಲ ಶುರುವಾದ ಶುಭಸೂಚನೆ . ಹೀಗಾಗಿ ವಿಷ್ಣುಪ್ರಿಯೆ ತುಳಸಿಯ ವಿವಾಹದೊಂದಿಗೆ ಆ ವರ್ಷದ ಮದುವೆ-ಮುಂಜಿ ಸಮಾರಂಭಗಳನ್ನ ಆರಂಭಿಸುವ ಪರಿಪಾಠ ನಮ್ಮಲ್ಲಿದೆ. 

                                

ಅಕ್ಷತಾ ಮನ್ಮನೆ

Image Description