ನಾಗೇಂದ್ರ ಉಪ್ಪುಂದ ಸಾರಥ್ಯದಲ್ಲಿ COVERPAGE.IN

ಮಂಗಳೂರು:

ಘಟನೆ : ನಿನ್ನೆ ಅಂದರೆ ಅ.29ರಂದು ರಾತ್ರಿ 8.30ಕ್ಕೆ ನನ್ನ ಮೊಬೈಲ್‍ಗೆ ಹರೀಶ್ ಎಂಬವರು ಕರೆ ಮಾಡಿ, ಬಂಟ್ವಾಳದಲ್ಲಿ ಸುಜಿತ್ ಮತ್ತು ಫೈರೋಜ್ ಎಂಬವರು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ತಂದಿದ್ದೇವೆ. ಆ ಪೈಕಿ, ಫೈರೋಜ್ ಸ್ಥಿತಿ ಗಂಭೀರವಿದೆ. ಅವರದ್ದು ಅತ್ಯಂತ ಬಡ ಕುಟುಂಬ. ಒಂದು ವೇಳೆ ಆಸ್ಪತ್ರೆ ಬಿಲ್ ಹೆಚ್ಚಾದರೆ, ನಿಮ್ಮಿಂದ ಸಹಾಯ ಮಾಡಲು ಸಾಧ್ಯವೇ? ಎಂದು ಕೇಳಿದರು, ಚಿಕಿತ್ಸೆ ಆರಂಭಿಸಲಿ, ಆಸ್ಪತ್ರೆ ಮ್ಯಾನೇಜ್‍ಮೆಂಟ್ ಬಳಿ ಮಾತನಾಡುತ್ತೇನೆ. ಹೆಚ್ಚು ಬಿಲ್ ಆದರೆ, ನನ್ನ ಗೆಳೆಯರ ಮೂಲಕ ಹೇಳಿ ಭರಿಸುತ್ತೇನೆ ಎಂದು ಫೋನ್ ಇಟ್ಟೆ.

ನಾನು ಮಾತನಾಡಿದ ಆ ಸಂಭಾಷಣೆಯ ಆಡಿಯೊವನ್ನು ನಮ್ಮ #ಎಂಫ್ರೆಂಡ್ಸ್ #ಚಾರಿಟೇಬಲ್ #ಟ್ರಸ್ಟ್ ಗ್ರೂಪ್‍ಗೆ ಹಾಕಿದೆ. ತಕ್ಷಣ ಕೆಲವು ಸದಸ್ಯರು ಸ್ಪಂದಿಸಿ, ಆರಿಫ್ ನೀವು ಮುಂದುವರಿಯಿರಿ. ನಾವು ನೆರವು ಕೊಡೋಣ ಎಂದು  ಪ್ರೋತ್ಸಾಹಿಸಿದರು.

ಹತ್ತು ನಿಮಿಷದಲ್ಲಿ ಮತ್ತೆ ಕರೆ ಮಾಡಿದ ಹರೀಶ್, ಮನೆಯವರು ಬಾರದೆ, ಹಣ ಪಾವತಿಸದೆ ಚಿಕಿತ್ಸೆ ಕೊಡುವುದಿಲ್ಲವಂತೆ, ಬೇಕಾದರೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಏನು ಮಾಡಲಿ? ಎಂದು ಕೇಳಿದರು. ಐದು ನಿಮಿಷ ಕಾಯಿರಿ, ನಾನು ಆಸ್ಪತ್ರೆಯವರ ಜತೆ ಮಾತನಾಡಿ ಹೇಳುತ್ತೇನೆ ಎಂದೆ. ಹಾಗೆ ಆಸ್ಪತ್ರೆಯ ಮಾರುಕಟ್ಟೆ ವಿಭಾಗದಲ್ಲಿ ನನ್ನ ಆಪ್ತರು ಮುಖ್ಯಸ್ಥರು. ನಾನು ಹೇಳಿದಾಗಲೆಲ್ಲಾ ಸ್ಪಂದಿಸಿದವರು. ಅವರಿಗೆ ವಿಷಯ ತಿಳಿಸಿದೆ. ಅವರು ವಿಚಾರಿಸಿ ಹೇಳುತ್ತೇನೆ ಎಂದರು. ಇತ್ತ ಹರೀಶ್ ಮತ್ತೆ ಮತ್ತೆ ಕರೆ ಮಾಡತೊಡಗಿದರು. ಅವರು ಹೇಳಿದರೆ, ಚಿಕಿತ್ಸೆ ಆರಂಭಿಸುತ್ತಾರಂತೆ, ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರು. ನಾನು ಮತ್ತೆ ನನ್ನ ಆ ಆಪ್ತರನ್ನು ಕರೆ ಮಾಡಿದೆ. ಏನು ಮಾಡೋಣ? ನೀವು ಜವಾಬ್ದಾರಿ ತೆಗೆದುಕೊಳ್ಳುವುದಾದರೆ, ಚಿಕಿತ್ಸೆ ಕೊಡಿಸುತ್ತೇವೆ ಎಂದರು. ನಾನು ಒಮ್ಮೆ ಚಿಕಿತ್ಸೆ ಆರಂಭಿಸಿ ಎಂದೆ. ಹರೀಶ್ ಮತ್ತೆ ಫೋನ್ ಮಾಡಿ, ಇಲ್ಲಿ ಆಸ್ಪತ್ರೆಗೆ ಸೇರಿಸಲು ಸಹಿ ಹಾಕಬೇಕಂತೆ. ಅವರ ಮನೆಯವರು ದೂರದಿಂದ ಬರಬೇಕು, ಅವರಲ್ಲಿ ಬರಲು ಹಣ ಇಲ್ಲ, ಒಮ್ಮೆ ಬನ್ನಿ, ಕಾರಿನ ಬಾಡಿಗೆ ಕೊಡುತ್ತೇನೆ ಎಂದೆ ಎಂದರು. ನೀವು ಸಹಿ ಹಾಕಿ, ಒಮ್ಮೆ ಚಿಕಿತ್ಸೆ ಆರಂಭಿಸಲಿ ಎಂದೆ.

ಇಲ್ಲಿ ನಮ್ಮ ಗ್ರೂಪಿನಿಂದ ಡಾ.ಮುಬಶ್ಶಿರ್, ಕಳವಾರು ಮೊಹಮ್ಮದ್, ಅಬೂಬಕರ್ ಗ್ರೂಪ್ ಮತ್ತಿತರರು ಜಾಗೃತರಾದರು. ಆ ಬಡ ಕುಟುಂಬಕ್ಕೆ ಉಚಿತವಾಗಿ ಹೇಗೆ ಚಿಕಿತ್ಸೆ ಕೊಡಿಸಬಹುದು ಎಂಬ ಬಗ್ಗೆ ಸಮಾಜಸೇವಕ ಝಿಯಾ ಅಹ್ಮದ್, ಝಕರಿಯಾ ಫರ್ವೇಝ್ ಅವರ ಸಲಹೆ ಪಡೆದರು. ಅವರೆಲ್ಲರ ಜತೆ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಜಗನ್ನಾಥ್ ಜತೆಯೂ ಮಾತನಾಡಿದೆ.

ನಾನು ನನ್ನ ಕೆಲಸ ಮಾಡುತ್ತಲೇ, ಈ ಫೋನ್‍ಗಳನ್ನು ಅಟೆಂಡ್ ಮಾಡುತ್ತಲೇ ಇದ್ದೆ. ರಾತ್ರಿ 11 ಗಂಟೆಯಾದರೂ, ಹರೀಶ್ ಅವರು ಆಸ್ಪತ್ರೆಯಲ್ಲೇ ಇದ್ದು, ದಾಖಲಾತಿ, ರಕ್ತ ಎಂದೆಲ್ಲಾ ನೆರವಾಗುತ್ತಲೇ ಇದ್ದರು.11.30ರ ವೇಳೆಗೆ ನಾನು ಮತ್ತು ಕಳವಾರು ಮೊಹಮ್ಮದ್ ಅವರು ಆಸ್ಪತ್ರೆಗೆ ಹೋದೆವು. ಮೊದಲು ಆ ಹರೀಶ್ ಯಾರೆಂದು ನೋಡಿದೆವು. ಅವರ ಜತೆಗೆ ಇತರ ನಾಲ್ಕು ಜನ ಇದ್ದರು. ಅವರ ಸೇವೆ ಬಗ್ಗೆ ಅಭಿಮಾನದಿಂದ ಕೃತಜ್ಞತೆ ಸಲ್ಲಿಸಿದೆವು. ಅವರು ಆಗಲೇ ಆಸ್ಪತ್ರೆಯ ಸ್ವಲ್ಪ ಮೊತ್ತ ಪಾವತಿಸಿದ್ದರು. ಅದನ್ನು ಕೊಡಲು ಹೋದಾಗಲೂ ಅವರು ಸ್ವೀಕರಿಸಲಿಲ್ಲ. ನಾವು ಬಂದಿದ್ದೇವೆ ಎಂದು ಹೇಳಿ, ಅವರನ್ನು ಬೀಳ್ಕೊಟ್ಟೆವು. 


ಫೈರೋಜ್‍ನ ಪತ್ನಿ ಮತ್ತು ಮೂವರು ಮಕ್ಕಳು ಇದ್ದರು. ಅವರಿಗೆ ಸಮಾಧಾನ ಹೇಳಿದೆವು. ಇಲ್ಲಿ ಅವರು ಚೇತರಿಸಿಕೊಳ್ಳಲಿ. ನಾಳೆ ಪರಿಸ್ಥಿತಿ ನೋಡಿ, ಬೇಕಾದರೆ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ ಎಂದು ಹೇಳಿ, 12 ಗಂಟೆ ವೇಳೆಗೆ ಮರಳಿದೆವು.

ಇಲ್ಲಿ ಹೇಳಬೇಕಾದುದು ಇಷ್ಟೇ. ಒಬ್ಬ ಕೂಲಿ ಕಾರ್ಮಿಕ ಫೈರೋಜ್‍ನನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದು, ಎಲ್ಲ ರಿಸ್ಕ್ ತೆಗೆದುಕೊಂಡು ಮಧ್ಯರಾತ್ರಿ ತನಕವೂ ಚಿಕಿತ್ಸೆ ನೆರವಾದರಲ್ಲ, ಇದು ಮಾನವೀಯತೆ... ಮಾನವೀಯತೆ ಇನ್ನೂ ಜೀವಂತ ಇದೆ. ಹರೀಶ್ ಮತ್ತು ಅವರ ತಂಡಕ್ಕೆ ನಮ್ಮ ಸೆಲ್ಯೂಟ್. ಅವರಿಗೆ ಕೃತಜ್ಞತೆ ಸಲ್ಲಿಸದಿದ್ದರೆ, ನಾವು ಕೃತಘ್ನರಾಗುತ್ತೇವೆ.

-ಆರಿಫ್ ಪಡುಬಿದ್ರಿ

ಈ ಬಗ್ಗೆ ಹರೀಶ್ ಪ್ರತಿಕ್ರಿಯೆ :

ನಮ್ಮ ಸ್ನೇಹಿತನ ಮನೆಯ ಹತ್ತಿರ ವಿದ್ಯುತ್ ಸ್ಪರ್ಶದ ವಿಷಯ ತಿಳಿದು ನಾನು ನನ್ನ ಸಹೋದರ ಜನಾರ್ದನ  ನಮ್ಮ ಸ್ನೇಹಿತರಾದ ನಿಶಾಂತ್ ಪುರುಷೋತ್ತಮ ರಕ್ಷಿತ್ ಸೇರಿ ನೆರವಾದೆವು. ಆಸ್ಪತ್ರೆಯಲ್ಲಿ ನಮಗೆ ಎನೂ ಮಾಡುವುದೆಂದು ತಿಳಿಯದೆ ಇದ್ದಾಗ ಪೋಲಿಸ್ ವಾರ್ತಾ ಸಂಪಾದಕರಾದ ರಂಜಿತ್ ರವರು ಆರಿಫ್  ಇವರನ್ನು ಸಂಪರ್ಕಿಸಲು ನೆರವಾದರು ಈಗ ಆ ವ್ಯಕ್ತಿ ಆರಾಮಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಾವು ಗೆಳೆಯರು ಸೇರಿ ಇಂತಹ ಕೆಲಸವನ್ನು ತುಂಬಾ ಮಾಡಿದ್ದೆವೆ ಆದರೆ ನಾವು ಯಾವುದನ್ನೂ ಪ್ರಚಾರಕ್ಕಾಗಿ ಮಾಡಿಲ್ಲ ಈ ಘಟನೆ ಆರಿಫ್ ಸರ್ ಮುಖಾಂತರ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಗುಣಮುಖರಾಗಿದ್ದು ನಮ್ಮ ಪ್ರಯತ್ನಕ್ಕೆ ಸಿಕ್ಕ ಯಶಸ್ಸು


ಸುನಿಲ್ ಕುಮಾರ್
 
COVERPAGE.IN













Image Description